ಚಾಡ್ ಗಣರಾಜ್ಯ-
ಉತ್ತರ ಮಧ್ಯ ಆಫ್ರಿಕದ ಒಂದು ಸ್ವತಂತ್ರ ರಾಷ್ಟ್ರ. ಫ್ರೆಂಚ್ ಸಮುದಾಯಕ್ಕೆ ಸೇರಿದೆ. ಉ.ಅ. 8-24 ಮತ್ತು ಪೂ.ರೇ. 14-24 ನಡುವೆ ಇದೆ. ಚಾಡ್‍ನ ಪೂರ್ವದಲ್ಲಿ ಸೂಡಾನ್, ದಕ್ಷಿಣದಲ್ಲಿ ಮಧ್ಯ ಆಫ್ರಿಕ ಗಣರಾಜ್ಯ, ಪಶ್ಚಿಮದಲ್ಲಿ ಕ್ಯಾಮರೂನ್ ಗಣರಾಜ್ಯ, ನೈಜೀರಿಯ ಮತ್ತು ನೈಜರ್, ಉತ್ತರದಲ್ಲಿ ಲಿಬಿಯ ಇವೆ. ವಿಸ್ತೀರ್ಣ 12,84,000 ಚ.ಕಿ.ಮೀ. (4,95,000 ಚ.ಮೈ.) ಜನಸಂಖ್ಯೆ 37,91,000(1972ರ ಅಂದಾಜು). ರಾಜಧಾನಿ ಫಾರ್‍ಲ್ಯಾಮೀ (1,79,000).

	ಮೇಲ್ಮೈ ಲಕ್ಷಣಗಳು : ಜಾಡ್ ಸರೋವರದ ಉತ್ತರಕ್ಕಿರುವ ಪ್ರದೇಶ ಸಹಾರ ಪ್ರರೂಪಿ ಮರುಭೂಮಿ. ಈ ಮುಖಭೂಮಿಯ ಉತ್ತರ ಮತ್ತು ಪೂರ್ವದಲ್ಲಿ ಟೆಬೆಸ್ಟಿ ಮತ್ತು ಎನ್ನೆಡಿ ಪರ್ವತಗ್ರಂಥಿಗಳಿವೆ. ಇವು ಮರಳುಗಲ್ಲು ಹಾಗೂ ಬೆಣಚುಕಲ್ಲುಗಳಿಂದ ಕೂಡಿವೆ. ಎತ್ತರ 4,000-4,699'. ದಕ್ಷಿಣದಲ್ಲಿ ಮರಳಿನಿಂದ ತುಂಬಿದ ಪ್ರಸ್ಥಭೂಮಿ ಹಾಗೂ ಇಳಿಜಾರು ಪ್ರದೇಶಗಳಿವೆ. ಅನೇಕ ಸ್ಫಟಿಕಾಕೃತಿಯ ಪದರಗಳಿರುವ ಬಂಡೆಗಳೂ ಎತ್ತರ ಪರ್ವತ ಪಂಕ್ತಿಗಳೂ ದೊಡ್ಡ ಬೆಟ್ಟಗಳೂ ತಗ್ಗು ಪ್ರದೇಶಗಳೂ ಮರಳುದಿಣ್ಣೆಗಳೂ ಇರುವ ಚಾಡ್‍ನ ಪ್ರಮುಖ ನದಿಗಳು ಶಾರಿ ಮತ್ತು ಲೋಗೋನ್. ಜುಲೈ ತಿಂಗಳಿಂದ ನವೆಂಬರ್ ಮಧ್ಯಭಾಗದವರೆಗೆ ಇವು ತುಂಬಿ ಹರಿಯುತ್ತವೆ. ಅವನತ ಪ್ರದೇಶದಲ್ಲಿ ಹರಿಯುವ ತೊರೆಗಳು (ಬಾಹ್ರ್) ಮಳೆಗಾಲದಲ್ಲಿ ಪ್ರಸರಿಸಿ ಸಂಚಾರ ಅಸಾಧ್ಯವಾಗುವಂತೆ ಮಾಡುತ್ತವೆ. ಚಾಡ್‍ನ ನೈಋತ್ಯ ಭಾಗ ಮೆಕ್ಕಲು ಮಣ್ಣಿನ ಜವುಗು ಪ್ರದೇಶ.

	ವಾಯುಗುಣ : ಚಾಡ್ ಸರೋವರದ ಉತ್ತರದಲ್ಲಿ ಸಹಾರಾ ಪ್ರರೂಪಿ ವಾಯುಗುಣವಿದೆ. ಬೇಸಗೆಯಲ್ಲಿ ಉಷ್ಣತೆ ಬದಲಾಗುತ್ತಿರುತ್ತದೆ. ವಾರ್ಷಿಕ ಮಳೆ ತೀರ ಕಡಿಮೆ; ಎನ್ನೆಡಿ ಪ್ರಸ್ಥಭೂಮಿಯಲ್ಲಿ 2"ಗಿಂತಲೂ ಕಡಿಮೆ. ದಕ್ಷಿಣಕ್ಕೆ ಹೋದಂತೆ ಮಳೆ ಹೆಚ್ಚು, ಉಷ್ಣತೆ ಕಡಿಮೆ. ಇಲ್ಲಿ ಸೂಡಾನ್ ಪ್ರರೂಪಿ ವಾಯುಗುಣವಿದೆ. ಅತಿ ಮಳೆಯಾಗುವ ಮತ್ತು ಅತ್ಯಂತ ಕಡಿಮೆ ಮಳೆಯ ಪ್ರದೇಶಗಳ ನಡುವಿನದು ಸಾಹೀಲಿಯನ್ ಪ್ರರೂಪಿ ಅರೆಮರುಭೂಮಿ ವಾಯುಗುಣ.

	ಸಸ್ಯ ಪ್ರಾಣಿ ಜೀವನ : ಮರುಭೂಮಿ ಪ್ರದೇಶದಲ್ಲಿ ಕಣಿವೆಗಳಲ್ಲಿ ಪೊದೆಗಳು ಬೆಳೆಯುತ್ತವೆ. ಸಾಹೀಲಿಯನ್ ಪ್ರದೇಶದಲ್ಲಿ ಖರ್ಜೂರ ಮತ್ತು ಇತರ ಮರಗಳಿವೆ. ದಕ್ಷಿಣದ ಸೂಡಾನ್ ಪ್ರರೂಪಿ ವಾಯುಗುಣ ಪ್ರದೇಶದಲ್ಲಿ ವಿಶಾಲವಾದ ಹುಲ್ಲುಗಾವಲುಗಳು ಹಬ್ಬಿವೆ. ಹುಲ್ಲುಗಾವಲಿನ ಪ್ರಾಣಿಗಳು ಆನೆ, ಸಿಂಹ, ಚಿರತೆ ಮತ್ತು ಕಾಡೆಮ್ಮೆ. ಆಮ್ ಟಿಮನ್ ಬಳಿಯಲ್ಲಿರುವ ಜಕೌಮ ರಾಷ್ಟ್ರೀಯ ವನಮಧ್ಯ ಆಫ್ರಿಕದ ಮುಖ್ಯ ಅಭಯಾರಣ್ಯ.
	
ಜನಜೀವನ : ಜನರ ಹಂಚಿಕೆ ಸಮವಾಗಿಲ್ಲ ಹೆಚ್ಚಿನ ಜನ ಅಲೆಮಾರಿಗಳು, ಕುರುಬರು, ಟಿಬೆಸ್ಟಿಯಲ್ಲಿರುವ ಟೇಡ ಮತ್ತು ಎನ್ನೆಡಿಯಲ್ಲಿರುವ ಡಾಜ ಮುಖ್ಯ ಬುಡಕಟ್ಟುಗಳು. ದಕ್ಷಿಣದಲ್ಲಿ ಸಾಹೆಲ್‍ವರೆಗೂ ಅರಬರು ವಿಸ್ತರಿಸಿದ್ದಾರೆ. ಅವರು ಒಂಟೆ ಮತ್ತು ಜಾನುವಾರುಗಳನ್ನು ಸಾಕುತ್ತಾರೆ. ದಕ್ಷಿಣ ಭಾಗದಲ್ಲಿ ಮೀನು ಹಿಡಿಯುವುದೂ ಒಂದು ಪ್ರಮುಖ ವೃತ್ತಿ. ಬತ್ತ, ರಾಗಿ, ಹತ್ತಿ, ನೆಲಗಡಲೆ ಮತ್ತು ಸಾರ್ಗಂಜೋಳವನ್ನು ಬೆಳೆಯುತ್ತಾರೆ. ಮುಖ್ಯ ಭಾಷೆ ಫ್ರೆಂಚ್. ಸ್ಥಳೀಯ ಭಾಷೆಗಳೂ ಬಳಕೆಯಲ್ಲಿವೆ. ಮೀನು ಮುಖ್ಯ ಆಹಾರ. ಮುಸ್ಲಿಮರೂ ಕ್ರೈಸ್ತರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಜನ ಬಡವರು.
	
ಇತಿಹಾಸ : ನವಶಿಲಾಯುಗದಲ್ಲಿ ಇದು ಜನಸಮೃದ್ಧ ಪ್ರದೇಶವಾಗಿತ್ತು. ಇಲ್ಲಿ ನೆಗ್ರಾಯಿಡ್ ಗುಹಾವಾಸಿ ಜನರಿದ್ದರೆಂದು ಊಹಿಸಬಹುದು. 1950ರಲ್ಲಿ ನಡೆಸಿದ ಉತ್ಖನನದಿಂದ ಚಾಡ್‍ನಲ್ಲಿ ಮಧ್ಯಯುಗದ ಸೂಡಾನಿನ ವಿಶಾಲ ರಾಜ್ಯಗಳನ್ನು ಸಹಾರದಿಂದ ಬಂದ ಬರ್ಬರರು ಕಟ್ಟಿದ್ದರು. ಇವುಗಳಲ್ಲಿ ಮುಖ್ಯವಾದ್ದು ಸೆಫಾವಾ ರಾಜವಂಶದ ಕಾನೆಮ್ ಸಾಮ್ರಾಜ್ಯ. ಇದು ಚಾಡ್ ಸರೋವರದ ವಾಯುವ್ಯದಲ್ಲಿತ್ತು. 14ನೆಯ ಶತಮಾನದಲ್ಲಿ ಇದು ಅಂತಃಕಲಹಗಳಿಂದಲೂ ಅದರ ಪೂರ್ವದಲ್ಲಿದ್ದ ಫಿಟ್ರಿಯ ಬುಲಾಲ ರಾಜ್ಯದ ಒತ್ತಡದಿಂದಲೂ ನಾಶವಾಯಿತು. ಪಶ್ಚಿಮಕ್ಕೆ ನಡೆದ ಈ ರಾಜ್ಯವನ್ನು ಮೈ ಇಡ್ರಿಸ್ ಎಂಬ ಬುಲಾಲ ದೊರೆ ಮತ್ತೆ ಗೆದ್ದ. ಕಾನೆಂ-ಬಾರ್ನು ಪರಮೋನ್ನತಿಯ ದೆಶೆ ಮುಟ್ಟಿದ್ದು ಮೈ ಇಡ್ರಿಸ್ ಅಲೂಮನ (1580-1603) ಕಾಲದಲ್ಲಿ. ಮಧ್ಯಯುಗದ ಕಾನೆಂ ಸಾಮ್ರಾಜ್ಯ ಇಸ್ಲಾಮೀ ಸೂಡಾನೀ ಸಂಸ್ಕøತಿಯ ಕೇಂದ್ರವಾಗಿತ್ತು.
	
ಈ ಸಂಸ್ಕøತಿಯ ಉತ್ಪನ್ನಗಳಾಗಿ 17ನೆಯ ಶತಮಾನದ ಆದಿಯಲ್ಲಿ ಬಗ್ವಿರ್ಮಿ ಮತ್ತು ಉವಾದೈ ರಾಜ್ಯಗಳು ತಲೆಯೆತ್ತಿದುವು. 18ನೆಯ ಶತಮಾನದಲ್ಲಿ ಉವಾದೈ ರಾಜ್ಯ ಪ್ರಬಲವಾಯಿತು, ಇದೂ ಇತರ ರಾಜ್ಯಗಳೂ ಗುಲಾಮ ವ್ಯಾಪಾರದಲ್ಲಿ ನಿರತವಾಗಿದ್ದುವು. 19ನೆಯ ಶತಮಾನದಲ್ಲಿ ಇವು ಕ್ಷೀಣಿಸಿದುವು. ರಾಬಾ ಪ್ರಬಲವಾಯಿತು. ಆ ವೇಳೆಗೆ ಪರಕೀಯರ ಪ್ರಾಬಲ್ಯ ಇಲ್ಲಿ ಬೆಳೆಯಲಾರಂಭಿಸಿತು. 1891ರಲ್ಲಿ ಮೊದಲ ಫ್ರೆಂಚ್ ನಿಯೋಗ ಚಾಡ್‍ಗೆ ಬಂತು. 1900ರಲ್ಲಿ ಫ್ರೆಂಚರು ರಾಬಾ ಆಡಳಿತವನ್ನು ಉರುಳಿಸಿ ಹಳೆಯ ಕಾನೆಂಬು ಮನೆತನದವರಿಗೆ ರಾಜ್ಯ ನೀಡಿದರು. ಫ್ರೆಂಚರ ರಕ್ಷಣೆಯಲ್ಲಿ ಚಾಡ್ ವಸಾಹತು ಅಷ್ಟೇನೂ ಮುಂದುವರಿಯಲಿಲ್ಲ. 1958ರಲ್ಲಿ ಆಗಸ್ಟ್ 11ರಂದು ಸ್ವತಂತ್ರ ಗಣರಾಜ್ಯವಾಯಿತು. ಅದು ಈಗಲೂ ಫ್ರೆಂಚ್ ಸಮುದಾಯದ ಸದಸ್ಯ ರಾಷ್ಟ್ರವಾಗಿದೆ.
	
ಆಡಳಿತ : ಚಾಡ್‍ನ ಆಡಳಿತಮುಖ್ಯಸ್ಥ ಅಧ್ಯಕ್ಷ. ಇವರ ಅಧಿಕಾರಾವಧಿ 7 ವರ್ಷ. ಅಧ್ಯಕ್ಷ ಸರ್ಕಾರದ ಸದಸ್ಯರನ್ನು ಆರಿಸುತ್ತಾನೆ. ಸಚಿವಸಂಪುಟಕ್ಕೆ ಇವನೇ ಅಧ್ಯಕ್ಷ. ರಾಷ್ಟ್ರೀಯ ವಿಧಾನಸಭೆಗೆ ಐದು ವರ್ಷಗಳಿಗೊಮ್ಮೆ ಚುನಾವಣೆ. ರಾಷ್ಟ್ರವನ್ನು 14 ಪ್ರಾಂತ್ಯಗಳಾಗಿ ವಿಂಗಡಿಸಬಹುದು. ಉಪಪ್ರಾಂತ್ಯ ಜಿಲ್ಲೆ, ಕ್ಯಾಂಟನ್, ಕಮ್ಯೂನ್ ಮತ್ತು ಹಳ್ಳಿಗಳು ಪ್ರಾಂತ್ಯಗಳ ಆಡಳಿತ ವಿಭಾಗಗಳು.
	
ಅರ್ಥವ್ಯವಸ್ಥೆ : 1966ರಲ್ಲಿ ಪಂಚವಾರ್ಷಿಕ ಯೋಜನೆ ಪ್ರಾರಂಭವಾಯಿತು. ವಿದ್ಯುಚ್ಛಕ್ತಿಯ ಅಭಾವದಿಂದ ಕೈಗಾರಿಕೆ ಹಿಂದುಳಿದಿದೆ. ಇತ್ತೀಚೆಗೆ ಕೃಷಿ ಪ್ರಗತಿ ಸಾಧಿಸುತ್ತಿದೆ. ವ್ಯಾಪಾರ ವ್ಯವಹಾರ ಆಫ್ರಿಕದೊಳಗೇ - ಮುಖ್ಯವಾಗಿ ಕಾಂಗೋ, ಕ್ಯಾಮರೂನ್, ನೈಜೀರಿಯಗಳೊಡನೆ. ಮುಖ್ಯ ರಫ್ತು : ಮಾಂಸ, ಚರ್ಮ, ಹತ್ತಿ ಮತ್ತು ನೆಲಗಡಲೆ. ಆಮದು : ಯಂತ್ರೋಪಕರಣಗಳು, ಪೆಟ್ರೋಲಿಯಂ, ಕಬ್ಬಿಣ, ಬಟ್ಟೆ, ಉಕ್ಕು, ಸಿಮೆಂಟು, ಚಹ ಮತ್ತು ಕಾಗದ.
	
ಸಮುದ್ರದಿಂದ ದೂರ ಇರುವ ಚಾಡ್‍ನ ಮುಖ್ಯ ಸಮಸ್ಯೆಯೆಂದರೆ ಸಾರಿಗೆ ಸಂಪರ್ಕ ತೊಂದರೆ. ಕೆಲವು ನದಿಗಳ ಮೇಲೆ ಮಳೆಗಾಲದಲ್ಲಿ ಸಂಚಾರ ಸಾಧ್ಯ. ಹಲವು ತೊರೆಗಳು ಮಳೆಗಾಲದಲ್ಲಿ ವಿಸ್ತರಿಸಿ ಸಂಚಾರಕ್ಕೆ ಅಡಚಣೆ ಮಾಡುತ್ತವೆ. ಚಾಡ್‍ನಲ್ಲಿ ರೈಲು ಮಾರ್ಗಗಳಿಲ್ಲ. ಸುಮಾರು 7,500 ಮೈಲಿಗಳಷ್ಟು ದೂರದ ಉತ್ತಮ ರಸ್ತೆಗಳಿವೆ. ಫಾರ್‍ಲ್ಯಾಮಿಯಿಂದ ಹೊರದೇಶಗಳಿಗೆ ವಿಮಾನ ಸಂಪರ್ಕವಿದೆ.
	
ಫಾರ್‍ಲ್ಯಾಮೀ ಅಲ್ಲದೆ ಇತರ ಮುಖ್ಯ ನಗರಗಳು ಸಾರ್ (43,700) ಮೌಂಡೌ (39,000) ಅಬೆಚಿ (28,100) ಮತ್ತು ಕೌಮ್ರ (17,000).									(ಎಚ್.ಜಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ